ಪಾಣಿಪಟ್ ಕದನಗಳು -
ಭಾರತದ ಇತಿಹಾಸದ ಮೇಲೆ ವಿಶೇಷ ಪ್ರಭಾವ ಬೀರಿ ಅದರ ಗತಿಯನ್ನೇ ಬಹಳಮಟ್ಟಿಗೆ ಬದಲಾಯಿಸಿದ ಮೂರು ನಿರ್ಣಾಯಕ ಕದನಗಳು. ಇವು ಅನುಕ್ರಮವಾಗಿ 1526, 1556 ಮತ್ತು 1761ರಲ್ಲಿ ದೆಹಲಿಯ ಉತ್ತರಕ್ಕೆ ಸುಮಾರು 80 ಕಿಮೀ ದೂರದಲ್ಲಿರುವ ಪಾಣೀಪಟ್ ಎಂಬಲ್ಲಿ ನಡೆದುವು. ಈ ಸ್ಥಳ ಮಟ್ಟಸವಾದ ಬಯಲಾಗಿದ್ದು ಅಶ್ವದಳಗಳ ಸಂಚಾರಕ್ಕೆ ಅನುಕೂಲವಾಗಿದ್ದುದು ಕದನಕ್ಕೆ ಅನುಕೂಲವಾಗಿ ಒದಗಿಬಂತು.

ಒಂದನೆಯ ಪಾಣೀಪಟ್ ಕದನ 1526ರ ಏಪ್ರಿಲ್ 21ರಂದು ದೆಹಲಿಯ ಸುಲ್ತಾನ ಇಬ್ರಾಹಿಂ ಲೋದಿಗೂ ಕಾಬೂಲಿನಿಂದ ದಂಡೆತ್ತಿ ಬಂದಿದ್ದ ಮೊಗಲ್ ದೊರೆ ಬಾಬರನಿಗೂ ನಡೆಯಿತು. ಇಬ್ರಾಹಿಂ ಲೋದಿಯ ಕಡೆ ಇದ್ದ ಸೈನ್ಯದಲ್ಲಿ ಒಂದು ಲಕ್ಷ ಜನರಿದ್ದರು. ಆದರೆ ಬಾಬರನ ಬಳಿ ಇದ್ದ ಸೈನಿಕರು ಕೇವಲ 2,000. ಆದರೆ ಬಾಬರನ ಕುಶಲ ಯುದ್ಧತಂತ್ರದಿಂದಾಗಿ ಅವನ ಕೈ ಮೇಲಾಯಿತು. ಅವನು ತನ್ನಲ್ಲಿದ್ದ ಫಿರಂಗಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿದ. ಇಬ್ರಾಹಿಂ ಲೋದಿ ಸೋತು ಸಾವಿಗೆ ಈಡಾದ. ಬಾಬರ್ ದೆಹಲಿ ಆಗ್ರಗಳನ್ನು ಆಕ್ರಮಿಸಿಕೊಂಡು ಭಾರತದಲ್ಲಿ ಮೊಗಲ್ ಸಾಮ್ರಾಜ್ಯವನ್ನು ಸ್ಥಾಪಿಸಿದ.

ಎರಡನೆಯ ಪಾಣೀಪಟ್ ಕದನ 1556ರರ ನವೆಂಬರ್ 5 ರಂದು ಆಫ್ಘನ್ ದೊರೆ ಆದಿಲ್ ಷಾ ಸುರನ ಸಮರ್ಥ ಹಿಂದೂ ಸೇನಾನಿ ಹಾಗೂ ಮಂತ್ರಿ ಹೀಮುವಿಗೂ, ತಂದೆಯ ಕಳೆದುಹೋಗಿದ್ದ ಸಾಮ್ರಾಜ್ಯವನ್ನು ಮತ್ತೆ ಗೆದ್ದುಕೊಳ್ಳತೊಡಗಿದ್ದ ಅಕ್ಬರ್ ಹಾಗೂ ಅವನ ಪೋಷಕ ಬೈರಾಮ್ ಖಾನನಿಗೂ ನಡುವೆ ನಡೆಯಿತು. ಹೀಮುವಿನ ಸೈನ್ಯ ದೆಹಲಿಯನ್ನೂ ಆಗ್ರವನ್ನೂ ಗೆದ್ದು ಪಾಣೀಪಟ್‍ನಲ್ಲಿ ಮೊಗಲ್ ಸೈನ್ಯವನ್ನು ಎದುರಿಸಿತು. ಹೀಮುವಿನ ಸೈನ್ಯ ಮೊಗಲರದಕ್ಕಿಂತ ದೊಡ್ಡದಾಗಿತ್ತು. ಅದರಲ್ಲಿ 1,50 ಆನೆಗಳಿದ್ದುವು. ಆರಂಭದಲ್ಲಿ ಹೀಮುವಿಗೇ ಜಯವಾಯಿತು. ಆದರೆ ಅಕಸ್ಮಾತ್ತಾಗಿ ಬಾಣವೊಂದು ಅವನ ಕಣ್ಣಿಗೆ ತಾಗಿತು. ಹೀಮುವಿಗೆ ಜ್ಞಾನ ತಪ್ಪಿತು. ತಮ್ಮ ನಾಯಕ ಬಿದ್ದುದರಿಂದ ಸೈನಿಕರು ದಿಕ್ಕೆಟ್ಟು ಓಡಿದರು. ಹೀಮು ಸೆರೆಯಾದ. ಅವನನ್ನು ಕೊಲ್ಲಲಾಯಿತು. ಎರಡನೆಯ ಕದನವೂ ನಿರ್ಣಾಯಕವಾಗಿ ಮುಕ್ತಾಯಗೊಂಡಿತು. ವಿಜಯಿ ಅಕ್ಬರ್ ದೆಹಲಿ ಆಗ್ರಗಳನ್ನು ಮತ್ತೆ ವಶಪಡಿಸಿಕೊಂಡ. ಭಾರತದಲ್ಲಿ ಪ್ರಭುತ್ವ ಸ್ಥಾಪಿಸಲು ಆಫ್ಘನರಿಗೂ ಮೊಗಲರಿಗೂ ನಡೆದಿದ್ದ ಸ್ಪರ್ಧೆಯಲ್ಲಿ ಮೊಗಲರು ಗೆದ್ದರು. ಅನಂತರ ಸುಮಾರು ಮುನ್ನೂರು ವರ್ಷಗಳ ಕಾಲ ಅವರು ದೆಹಲಿಯ ಸಿಂಹಾಸನದ ಮೇಲೆ ಕುಳಿತು ಆಳಿದರು.

ಮೂರನೆಯ ಪಾಣೀಪಟ್ ಕದನ 1761ರ ಜನವರಿ 14ರಂದು ಆಫ್ಘನ್ ಆಕ್ರಮಣಕಾರಿ ಅಹಮದ್ ಷಾ ಅಬ್ದಾಲಿಗೂ ಮರಾಠರಿಗೂ ನಡುವೆ ನಡೆಯಿತು. ಮೊಗಲ್ ಚಕ್ರವರ್ತಿ 2ನೆಯ ಷಾ ಆಲಮನ ರಕ್ಷಣೆಗಾಗಿ ಮುನ್ನುಗ್ಗಿದ್ದ ಮರಾಠರು ಮೊಗಲ್ ಸಾಮ್ರಾಜ್ಯಕ್ಕೆ ತಾವೇ ಉತ್ತರಾಧಿಕಾರಿಗಳಾಗಿ ಭಾರತವನ್ನಾಳಬೇಕೆಂದು ಆಶಿಸಿದ್ದರು. ಆದರೆ ಪಾಣೀಪಟ್ ಕದನದ ಪರಿಣಾಮವಾಗಿ ಆ ನಿರೀಕ್ಷೆ ಸುಳ್ಳಾಯಿತು. ಸುಮಾರು ಎರಡೂವರೆ ತಿಂಗಳುಗಳ ಕಾಲ ಪಾಣೀಪಟ್ ಬಳಿಯ ಸಣ್ಣಪುಟ್ಟ ಕದನಗಳಲ್ಲಿ ಸ್ವಲ್ಪಮಟ್ಟಿಗೆ ನಷ್ಟ ಹೊಂದಿ ಸಾಕಷ್ಟು ಆಹಾರವಿಲ್ಲದೆ ಬಳಲಿದ್ದ ಮರಾಠಾ ಸೈನ್ಯ ಪಾಣೀಪಟ್ ಕ್ಷೇತ್ರದ ಅಬ್ದಾಲಿಯ ಸೈನ್ಯವನ್ನು ನೇರವಾಗಿ ಹಾಗೂ ಅಂತಿಮವಾಗಿ ಎದುರಿಸಿತು. ಅಬ್ದಾಲಿಗೆ ಅಯೋಧ್ಯೆಯ ನವಾಬ ಶೂಜಾ-ಉದ್-ದೌಲನೂ ನಜೀಬ್ ಖಾನನೆಂಬ ಭಾರತೀಯ ಮುಸ್ಲಿಮನೂ ನೆರವಾಗಿ ತಮ್ಮ ಸೇನೆಯನ್ನು ಎಡಬಲಗಳಲ್ಲಿ ನಿಲ್ಲಿಸಿದ್ದರು. ಮರಾಠರ ಕಡೆ ಸದಾಶಿವರಾವ್ ಭಾವೊ ದಂಡನಾಯಕನಾಗಿದ್ದ. ಇಬ್ರಾಹಿಂ ಖಾನ್ ಗಾರ್ಡಿ, ಮಲ್ಹಾರ್ ರಾವ್ ಹೋಳ್ಕರ್ ಮತ್ತು ಜಾಂಕೋಜಿ ಸಿಂಧ್ಯರು ಅವನ ನೆರವಿಗೆ ನಿಂತಿದ್ದರು. ಅಬ್ದಾಲಿಯ ಸೈನ್ಯ ಸಂಖ್ಯೆಯಲ್ಲೂ ಸಾಮಥ್ರ್ಯದಲ್ಲೂ ಮರಾಠರದಕ್ಕಿಂತ ಮಿಗಿಲಾದ್ದಾಗಿತ್ತು. ಎರಡೂ ಪಕ್ಷಗಳ ನಡುವೆ ಬಿರುಸಾದ ಕದನ ನಡೆಯಿತು. ಕದನದಲ್ಲಿ ಸದಾಶಿವರಾವ್ ಭಾವೊ, ಪೇಷ್ವೆಯ ಮಗ ಮತ್ತು ಇನ್ನೂ ಹಲವು ಪ್ರಮುಖರು ಮಡಿದರು. ಮರಾಠರ ಕಡೆ ಅಗಾಧ ಸಾವು ನೋವು ನಷ್ಟಗಳಾದುವು. ಮೂರನೆಯ ಪಾಣೀಪಟ್ ಯುದ್ಧ ಭಾರತದ ಇತಿಹಾಸದಲ್ಲಿ ಇನ್ನೊಂದು ಪ್ರಮುಖ ತಿರುವಾಯಿತು. ಮೊಗಲ್ ಸಾಮ್ರಾಜ್ಯ ತನ್ನ ಶತ್ರುಗಳಾಗಿದ್ದ ಮರಾಠರ ನೆರವಿನಿಂದಲೂ ಉಳಿಯದಂತಾಯಿತು. ಮರಾಠರನ್ನೆಲ್ಲ ಒಂದುಗೂಡಿಸುವಂಥ ಪ್ರಭಾವ ಪೇಷ್ವೆಗೆ ಇರಲಿಲ್ಲವೆಂಬುದು ಸ್ಪಷ್ಟವಾಯಿತು. ಮೊಗಲ್ ಸಾಮ್ರಾಜ್ಯದ ಅಂತ್ಯದೊಡನೆ ಮರಾಠರು ಇಡೀ ಭಾರತದ ಸಮ್ರಾಟರಾಗಬಹುದೆಂಬ ಆಸೆ ಮುರಿದುಬಿತ್ತು. ವಿಜಯಿ ಅಬ್ದಾಲಿಯಾದರೂ ದೆಹಲಿಯಲ್ಲಿ ನಿಂತು ಆಳಲಾಗಲಿಲ್ಲ. ತನ್ನ ಸೇನೆ ಬಂಡಾಯವೇಳಬಹುದೆಂಬ ಅಂಜಿಕೆಯಿಂದಾಗಿ ಅವನು ಆಫ್ಘಾನಿಸ್ತಾನಕ್ಕೆ ಹಿಂದಿರುಗಿದ. ಮರಾಠರ ಸೋಲು, ಮೊಗಲ್ ಸಾಮ್ರಾಜ್ಯದ ಅಸ್ತ. ಭಾರತೀಯ ಮುಸ್ಲಿಮರ ಅಸಾಮಥ್ರ್ಯ ಹಾಗೂ ಅಸಂಘಟನೆ-ಇವುಗಳಿಂದ ಬ್ರಿಟಿಷರು ಭಾರತದಲ್ಲಿ ಪ್ರಬಲರಾಗಿ, ಉತ್ತರೋತ್ತರದಲ್ಲಿ ತಮ್ಮ ಸಾಮ್ರಾಜ್ಯವನ್ನು ನಿರ್ಮಿಸಿದರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ